ಭಾರತದೊಂದಿಗಿನ ಗಡಿ ವಿವಾದದ ಬಗ್ಗೆ ಮಾತನಾಡಿದ ನೇಪಾಳದ ಪ್ರಧಾನಿ ಬಾಲೆನ್ ಶಾ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ. ಭಾರತದೊಂದಿಗಿನ ಗಡಿ ವಿವಾದವನ್ನು ಪರಿಹರಿಸಲು ಬ್ರಿಟನ್ನಿಂದ ಮಧ್ಯಸ್ಥಿಕೆಗೆ ಯಾವುದೇ ವಿನಂತಿಯನ್ನು ಮಾಡಿಲ್ಲ ಎಂದು ಬಾಲೆನ್ ಶಾ (Balen Shah) ಹೇಳಿದ್ದಾರೆ. ಭಾರತ ಮತ್ತು ನೇಪಾಳ ನಡುವಿನ ಗಡಿ ಸಮಸ್ಯೆಗಳು ದ್ವಿಪಕ್ಷೀಯ ವಿಷಯಗಳಾಗಿವೆ. ಇವುಗಳನ್ನು ಉಭಯ ದೇಶಗಳು ನೇರ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಬಗೆಹರಿಸಿಕೊಳ್ಳಲು ಶಕ್ತವಾಗಿವೆ. ಇದರಲ್ಲಿ ಮೂರನೇ ದೇಶದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ನೇಪಾಳದ ನಡುವೆ ಲಿಪುಲೇಖ್, ಲಿಂಪಿಯಾಧುರ ಮತ್ತು ಕಲಾಪಾಣಿ ಕುರಿತು ಹಳೆಯ ಗಡಿ ವಿವಾದವಿದೆ. ಎರಡೂ ದೇಶಗಳು ಈ ಪ್ರದೇಶಗಳನ್ನು ತಮ್ಮದೇ ಎಂದು ಹೇಳಿಕೊಳ್ಳುತ್ತವೆ. ಈ ಪ್ರದೇಶಗಳು ಉತ್ತರಾಖಂಡದ ಭಾಗವೆಂದು ಭಾರತ ಹೇಳುತ್ತದೆ. ಆದರೆ, ನೇಪಾಳ ಇದು ತನಗೆ ಸೇರಿದ್ದೆಂದು ಹೇಳುತ್ತದೆ. ಕಲಾಪಾನಿ ಮತ್ತು ಲಿಪುಲೇಖ್ ನೇಪಾಳದ ಭಾಗ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ಬಾಲೆನ್ ಶಾ ಹೇಳಿಕೊಂಡಿದ್ದಾರೆ. ಈ ಜಾಗ ತಮ್ಮದು ಎನ್ನುವುದಕ್ಕೆ ಭಾರತದ ಬಳಿ ಪುರಾವೆಗಳಿದ್ದರೆ ಅವರು ಅದನ್ನು ತೋರಿಸಬೇಕು ಎಂದು ಬಾಲೆನ್ ಶಾ ಸವಾಲು ಹಾಕಿದ್ದಾರೆ.







