ಪ್ರೀತಿ ಮತ್ತು ಲಿವ್-ಇನ್ ರಿಲೇಷನ್ಶಿಪ್ಗೆ (Live In Relationship) ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಗಳೇ ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು(Bengaluru) ಕೆ.ಆರ್. ಪುರದ ಸಿಗೇಹಳ್ಳಿಯಲ್ಲಿ ತಡರಾತ್ರಿ ನಡೆದಿದೆ.
ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಹಾಗೂ ಇವರ ಕಿರಿಯ ಮಗಳು ಸುಪ್ರಿಯಾ (20) ಕೊಲೆಯಾದ ದುರ್ದೈವಿಗಳು. ಸೋಮಸುಂದರ್ ಅವರ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಆರೋಪಿ ಶ್ವೇತಾ, ಕೆನತ್ ಎಂಬಾತನ ಜೊತೆ ಮದುವೆಯಾಗದೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದಳು. ಮಗಳ ಈ ನಡವಳಿಕೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳಿಗೆ ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಸೋಮಸುಂದರ್ ಅವರು ಪತ್ನಿ ಮತ್ತು ಕಿರಿಯ ಮಗಳೊಂದಿಗೆ ಸಿಗೇಹಳ್ಳಿಯ ಡಾಮ್ನಿಕದ ಲೇಔಟ್ನಲ್ಲಿರುವ ‘ಸಾಯಿ ಗ್ರೀನ್ ಅಪಾರ್ಟ್ಮೆಂಟ್’ಗೆ ಬಂದಿದ್ದರು. ಈ ವೇಳೆ ಪೋಷಕರು ಹಾಗೂ ಶ್ವೇತಾ-ಕೆನತ್ ಜೋಡಿ ನಡುವೆ ತೀವ್ರ ಗಲಾಟೆ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗಿದಾಗ ಪ್ರೇಮಿಗಳಿಬ್ಬರು ಸೇರಿ ತಂದೆ, ತಾಯಿ ಹಾಗೂ ತಂಗಿಯ ಮೇಲೆ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾರೆ. ತೀವ್ರವಾಗಿ ಇರಿತಕ್ಕೊಳಗಾದ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾ ಮನೆಯ ಒಳಗಡೆಯೇ ರಕ್ತದ ಮಡುವಿನಲ್ಲಿ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ.







