ಭಾರತ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಆಟಗಾರ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಅಮೋಘ ಸಾಧನೆಗೆ ದೇಶದ ಅತ್ಯುನ್ನತ ಗೌರವ ಲಭಿಸಿದೆ. ಕ್ರೀಡಾ ಕ್ಷೇತ್ರದಲ್ಲಿ ಅವರು ಮಾಡಿರುವ ಅದ್ಭುತ ಸಾಧನೆ ಮತ್ತು ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರವು ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ನೀಡಿ ಗೌರವಿಸಿದೆ. ಮಂಗಳವಾರದಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರೋಹಿತ್ ಶರ್ಮಾಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ಪ್ರತಿಷ್ಠಿತ ಸಮಾರಂಭ ಅದ್ಧೂರಿಯಿಂದ ಕೂಡಿತ್ತು. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹಲವು ಕೇಂದ್ರ ಸಚಿವರು ಮತ್ತು ದೇಶದ ವಿವಿಧ ರಂಗಗಳ ಪ್ರಮುಖ ಗಣ್ಯರು ಸಾಕ್ಷಿಯಾದರು. ರೋಹಿತ್ ಶರ್ಮಾ ಈ ಪ್ರಶಸ್ತಿಯನ್ನು ಸ್ವೀಕರಿಸುವಾಗ ಅವರ ಪತ್ನಿ ರಿತಿಕಾ ಸಜ್ದೇ ಉಪಸ್ಥಿತರಿದ್ದರು.







